ಬೇನಾಮಿ ಮಹಾಶಯರು

Monday, 06 November 2006

ಮಾನ್ಯರೇ,

ನಿನ್ನೆಯ ದಿನ, ತಾವು ನನ್ನ ಬ್ಲಾಗಿಗೆ ಬಂದು ನನ್ನ ಬ್ಲಾಗನ್ನು ಪಾವನ ಮಾಡಿರುತ್ತೀರಿ. ಕಾಡಿನಲ್ಲಿ "ಸಿಂಹ"ವು ಬೇಟೆಯಾಡುವಂತೆ, ತಾವು ಈ ಅಲ್ಪನ ಕನ್ನಡದಲ್ಲಿ ಬರೆಯುವ ದಾರ್ಷ್ಟ್ಯಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದ್ದೀರಿ .

ಒಂದು ಕ್ಷಣ, ತಮ್ಮ ಪಾಂಡಿತ್ಯದ ಪ್ರಖರತೆಯು ನನ್ನ ಕಣ್ಣು ಕೋರೈಸಿತಾದರೊ, ಕನ್ನಡಾಂಬೆಯ ದಯೆಯಿಂದ ಚೇತರಿಸಿಕೊಂಡು, ನಿಮ್ಮ "ಪ್ರತಾಪ"ವನ್ನು ಕೊಂಡಾಡಲು ಹೊರಟಿದ್ದೇನೆ.

ತೆರೆಮರೆಯಲ್ಲೇ ಇದ್ದುಕೊಂಡು, ಕನ್ನಡಕ್ಕಾಗಿ ಹೋರಾಡುತ್ತಾ, ಅಣುಮಾತ್ರ ತಪ್ಪನ್ನೆಸಗಿಸಿದ ಕನ್ನಡಿಗರನ್ನೂ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳುವ ಈ ನಿಮ್ಮ ಶೌರ್ಯ, ದೈವ "ಪ್ರಸಾದ"ವೇ ಸೈ.

ಬಸವಣ್ಣನವರು ಹೇಳಿದಂತೆ, ತೆಗಳಿದವರನ್ನೂ ಹಿತೈಷಿಗಳೆಂದು ಭಾವಿಸುತ್ತಾ, ತಮ್ಮ ಪರಿಚಯವನ್ನು ತಿಳಿಯುವ ದುಸ್ಸಾಹಸಕ್ಕೆ ಕೈ ಹಾಕಿದ್ದೇನೆ. ಋಷಿ ಮೂಲವನ್ನೂ, ನದಿ ಮೂಲವನ್ನೂ ಹುಡುಕಬಾರದೆಂಬ ನಾಣ್ಣುಡಿಯು ಮನಸ್ಸನ್ನು ತಳಮಳಗೊಳಿಸುತ್ತಿದ್ದರೂ, ತಮ್ಮಂತಹ ಪ್ರಖರ ಪಂಡಿತರನ್ನ್ಗು ಕಂಡೇ ತೀರುವ ಹಂಬಲವು ಬಲವಾಗಿದೆ.

ಆ ನಿಟ್ಟಿನಲ್ಲಿ...

ದೇಹಭಾದೆ ತೀರಿಸಲು ತೋಟಕ್ಕೆ ನುಗ್ಗಿ, ಸಿಕ್ಕಿಹಾಕಿಕೊಂಡರೆ ಮುಜುಗರವಾಗುತ್ತದೆಂಬ ಭಯಕ್ಕೆ ಅವಸರದಲ್ಲಿ ತಮ್ಮ ಕೈ ವಸ್ತ್ರ ಬಿಟ್ಟು ಹೋಗಿದ್ದೀರಿ.

ತಾವು ಬಿಟ್ಟ (ಛೀ!) IP addressನ ಮೂಲಕ, ತಾವು ಅಮೇರಿಕಾ ದೇಶ ವಾಸಿಗರು ಎಂದು ತಿಳಿದು ಬಹಳ ಸಂತೋಷವೂ, ಕೌತುಕವೂ ಉಂಟಾಯಿತು. ಆ ದೂರದ ನಾಡಿಂದಲೇ ತಾವು ಕನ್ನಡದ ಸೇವೆ ಮಾಡುತ್ತಿರುವುದನ್ನು ಕಂಡು ಕಣ್ಣು ತುಂಬಿ ಬಂದವು. ನಿಮ್ಮ ಕರವಸ್ತ್ರ ಕೈಯಲ್ಲೇ ಇತ್ತಾದರೂ, ಅದನ್ನು ಕಣ್ಣಿಗೊತ್ತಿಕೊಳ್ಳುವ ಧೈರ್ಯ ಎನಗಿಲ್ಲ.

ತಮ್ಮ ಕರವಸ್ತ್ರವನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸುತ್ತೇನೆ:

ಕನ್ನಡ @131.204.128.73

ತಾವು ಡಿ.ವಿ.ಜಿ ಯವರ ಕಗ್ಗ ಕೇಳಿಯೇ ಇರುತ್ತೀರಿ, ಅದರಲ್ಲಿ ಈ ಪಾಮರನಿಗೆ ಇಷ್ಟವಾದ ಒಂದು ಕಗ್ಗ ಇಂತಿದೆ:

ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು? |

ಆತುಮದ ಪರಿಕಥೆಯನರಿತರೆ ನಾವು? ||

ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ |

ನೀತಿ ನಿಂದನೆಯೊಳಿರದು - ಮಂಕುತಿಮ್ಮ ||