ನಮ್ಮ ಎಷ್ಟೋ ಗುಣಗಳು, ಹವ್ಯಾಸಗಳು ನಮ್ಮ ಅಪ್ಪ, ಅಮ್ಮಂದಿರಿಂದ ಕಲಿತವು. ನಾನು ನನ್ನ ಅಪ್ಪಾಜಿಯಿಂದ ಬಹಳಷ್ಟು ಕಲಿತಿದ್ದೇನೆ. ಅದರಲೆಲ್ಲಾ ನಾನು ಅವರಿಗೆ ಚಿರಋಣಿಯಾಗಿರುವುದು ಅವರು ನನಗೆ ಓದುವ ಗೀಳು ಹಿಡಿಸಿದ್ದಕ್ಕೆ.
ಮಕ್ಕಳು ಹಿರಿಯರ ಅನುಕರಣೆ ಮಾಡುತ್ತಾರೆಂಬುದು ನಿಜ. ನಾನೂ ಅಪ್ಪಾಜಿ ಹಾಗೆ ತಿಂಡಿ ತಿನ್ನ್ಗುವಾಗಲೆಲ್ಲಾ ಪೇಪರ್ ನೋಡುತ್ತಲೇ ತಿಂಡಿ ತಿನ್ತಿದ್ನಂತೆ. ಆ ಚಾಳಿ ಇನ್ನೂ ಹೋಗಿಲ್ಲ. ಈ ಚಾಳಿ ಎಷ್ಟು 'ಖತರ್ ನಾಖ್' ಅಂದರೆ, ಊರಿಗೆ ಹೋದಾಗ, ಓದಕ್ಕೆ ಬೇರೇನೂ ಸಿಗದಾಗ, ದೊಡ್ಡಪ್ಪಾಜಿಯ ರೇಷ್ಮೆ ಸಾಕಣೆ ಪತ್ರಿಕೆಗಳನ್ನು ಓದ್ತಾ ಇದ್ದೆ.
ಹನುಮಂತನ ಬಾಲ ನಾನು ಮೊದಲ ಸರಿ ರಾಮಾಯಣ ಕೇಳಿದ್ದು ಅಪ್ಪಾಜಿ ಬಾಯಿಂದ. ಕುವೆಂಪು ಅವರ ರಾಮಾಯಣ ದರ್ಶನದಿಂದ ಕೆಲವು ಸಾಲುಗಳನ್ನ ಓದ್ತಾ ಹಾಗೆ ರಾಮಾಯಣದ ಕಥೆನೂ ಹೇಳೋರು. ಅದರಲ್ಲಿ ನನಗಿಷ್ಟವಾದದ್ದು ಹನುಮಂತನ ಬಾಲಕ್ಕೆ ಬೆಂಕಿ ಹಚ್ಚೋ ಪ್ರಸಂಗ. ಮುಂದೆ ಕುವೆಂಪು ಅವರ ಸುಮಾರು ಕಾದಂಬರಿ,ನಾಟಕ,ಕವನಗಳನ್ನ ಓದೋಕ್ಕೆ ಇದೇ ಪ್ರೇರಣೆ ಆಗಿರಬಹುದು.
ಪುಟ್ಟಿ ಸಂಚಯ ಬಹುಶಃ ಇದೆಲ್ಲಕ್ಕಿಂತ ಮನಮುಟ್ಟುವ ಉಡುಗೊರೆ - ಪುಟ್ಟಿ ಸಂಚಯ. 1981-84ರ ನಡುವೆ ಸುಧಾ ವಾರಪತ್ರಿಕೆಯಲ್ಲಿ ಬಂದ ಎಲ್ಲ "ಪುಟ್ಟಿ" ಕಾರ್ಟೂನ್ ಪುಟಗಳನ್ನು ಕತ್ತರಿಸಿ ಇಟ್ಟುಕೊಂಡು ಒಂದು ಪುಸ್ತಕ ಮಾಡಿ ಕೊಟ್ರು. ಒಂದು ಮಜಾ ಏನಂದ್ರೆ, ಈ ಕಾರ್ಟೂನ್ ಪುಟಗಳ ಹಿಂದೆ ಇದ್ದ crosswords ಮತ್ತು ಕ್ವಿಜ್ ಗಳು. ಈ ಸಂಚಿಕೇನ ಸುಮಾರು ೨-೩ ವರ್ಷಗಳ ಕಾಲ ತಿರುಗ್ ಹಾಕಿ-ಮಗುಚು ಹಾಕಿ ಓದಿದ್ ನೆನಪು.
ಲೈಬ್ರರಿ ಸಹವಾಸ ಬೇಸಿಗೆ ರಜದಲ್ಲಿ ಕಬ್ಬನ್ ಪಾರ್ಕಿನ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಕರೆದೋಯ್ದು ಬಿಡ್ತಾ ಇದ್ರು. ಅಲ್ಲಿ ಬೆಳಿಗ್ಗೆ ಇಂದ ಸಾಯಂಕಾಲದವರೆಗೆ ನಾನು, ಪುಸ್ತಕಗಳು. ಮಧ್ಯಾಹ್ನ ಸೆಕ್ರೆಟರಿಯೇಟ್ ಕ್ಯಾಂಟೀನಿನಲ್ಲಿ ಮಸಾಲೆ ದೋಸೆ ಇತ್ಯಾದಿ ಸೇವೆ. ವಾರೆ! ವಾ!!
ಹೀಗೆ ನನ್ನ ಪುಸ್ತಕದ ಗೀಳಿಗೆ ಅವ್ಯಾಗತವಾಗಿ ಸಪೋರ್ಟ್ ಮಾಡ್ದೋರು ಅಪ್ಪಾಜಿ. ವಿಜಯ ಹೈಸ್ಕೂಲಿನಲ್ಲಿ ಇದ್ದಾಗ ಭೈರಪ್ಪನವರ 'ವಂಶವೄಕ್ಷ' ಪುಸ್ತಕ ಓದೋದನ್ನ ನೋಡಿ ಮಾತ್ರ 'ದೊಡ್ಡೋರು ಓದೋ ಪುಸ್ತಕ ಈಗಾಗ್ಲೆ ಯಾಕೆ?' ಅನ್ನೋದನ್ನ ಬಿಟ್ರೆ, ಯಾವತ್ತೂ ನನ್ನ ಓದೋದರ ತಂಟೆಗೆ ಬಂದವರೂ ಅಲ್ಲ.
ಈ ಕಥೆಯ ಹಿಂದೆ ಏನಾದ್ರೋ ಸಂದೇಶ ಉಂಟೋ? ಖಂಡಿತ. ಮಕ್ಕಳಿಗೆ ಓದೋ ಹವ್ಯಾಸ ಬೆಳೆಸಿ. ಪುಸ್ತಕದ ಬಳುವಳಿ ಕೊಡಿ. ಪುಸ್ತಕಾನ ಓದಿ ಹೇಳಿ. ನಾಟಕಗಳನ್ನ ನಿಮ್ಮದೇ ಧಾಟಿಯಲ್ಲಿ ಆಡಿ,ಹಾಡಿ ತೋರಿಸಿ.
© 2003-2011 Pradeep Gowda